ಪ್ರಾರಂಭ ಪದದ ಹುಡುಕು
ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ |ಚಿಂತೆ ಕುಮುಲದು; ಹೊಗೆಗಳೊತ್ತವಾತ್ಮವನು ||ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ಕಿಟಿಕಿಯುಂ |ಸಂತತದಪೇಕ್ಷಿತವೊ - ಮಂಕುತಿಮ್ಮ ||
ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? |ಆಂತರಗಭೀರಗಳ ತಾನೆ ಕಂಡವನಾರ್? ||ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ |ಸ್ವಂತಕೇ ದುರ್ದರ್ಶ - ಮಂಕುತಿಮ್ಮ ||
ಅಂತವೆಲ್ಲಕುಮಿರುವುದಿರಲಿ; ವಿಷಯೇಂದ್ರಿಯದ |ಸಂತಾಪವುಂ ಮುಗಿವುದೆಂಬುದಲ ಪುಣ್ಯ? ||ಎಂತೊ; ನಿನ್ನಾಜ್ಞೆಯಿನೂ; ತಾಂ ಸೋತೊ; ಬೇಸತ್ತೊ |ಶಾಂತಿವಡೆಯಲಿ ಕರಣ - ಮಂಕುತಿಮ್ಮ ||
ಅಂತಾನುಮಿಂತಾನುಮೆಂತೊ ನಿನಗಾದಂತೆ |ಶಾಂತಿಯನೆ ನೀನರಸು ಮನ ಕೆರಳಿದಂದು ||ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||
ಅಂತೊ ಇಂತೋ ಎಂತೊ ಜೀವಕಥೆ ಮುಗಿಯುವುದು |ಅಂದೊ ಇಂದೋ ಎಂದೊ ಜನುಮ ಕಳೆಯುವುದು ||ಒಂದೆ ಮರೆವಿನ ಮುಸುಕು ಮುಸುಕಲಿಹುದೆಲ್ಲವನು |ಸಂತಸದ ಮಾತಿಷ್ಟೆ - ಮಂಕುತಿಮ್ಮ ||
ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು |ಚೆಂದಳಿರು ದಿನದಿನಮುಮೊಗೆಯೆ ನೀರೆರೆದು ||ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ |ನಿಂದಿರುವುದಲೆ ಧರ್ಮ - ಮಂಕುತಿಮ್ಮ ||
ಅಂದಿಗಂದಿನ ಕೆಲಸ; ಸಂದನಿತರಲಿ ತೃಪ್ತಿ |ಕುಂದದುಬ್ಬದ ಮನಸು ಬಂದುದೇನಿರಲಿ ||ಬಂಧು ಮತಿ ಲೋಕದಲಿ; ಮುನ್ದೃಷ್ಟಿ ಪರಮದಲಿ |ಹೊಂದಿರಲಿವದು ಪುಣ್ಯ - ಮಂಕುತಿಮ್ಮ ||
ಅಂಬುಧಿಯ ಮಡಕೆಯಲಿ; ಹೊಂಬಿಸಿಲ ಕಿಟಿಕಿಯಲಿ |ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ||ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ- |ಯಿಂಬು ಕಿಂಚಿನ್ಮತಿಗೆ - ಮಂಕುತಿಮ್ಮ ||