ಪ್ರಾರಂಭ ಪದದ ಹುಡುಕು
ಲಾವಣ್ಯವಾತ್ಮಗುಣವದರಿಂದೆ ಲೋಕಜನ |ದೇವವನು ಕಮನೀಯ ವಿಗ್ರಹಂಗಳಲಿ ||ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವ |ಸೇವೆಯಿಂ ನಲಿಯುವರು - ಮಂಕುತಿಮ್ಮ ||
ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||ಖೇಲನವ ಬೇಡವೆನುವರನು ವಿಧಿರಾಯನವ--- |ಹೇಳಿಪನು ಸೆರೆವಿಡಿದು - ಮಂಕುತಿಮ್ಮ ||
ಲೋಕಜೀವನದೆ ಮಾನಸದ ಪರಿಪಾಕವಾ |ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ ||ಸಾಕಲ್ಯದಾತ್ಮ ಸಂದರ್ಶನಕೆ ಕರಣವದು |ಲೋಕದಿಂ ನಿರ್ಲೋಕ - ಮಂಕುತಿಮ್ಮ ||
ಲೋಕದಲಿ ಭಯವಿರಲಿ; ನಯವಿರಲಿ; ದಯೆಯಿರಲಿ |ನೂಕುನುಗ್ಗುಗಳತ್ತ; ಸೋಂಕುರೋಗಗಳು ||ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ |ಲೋಕ ಮೂಲವು ನೋಡೊ - ಮಂಕುತಿಮ್ಮ ||
ಲೋಕವೆಲ್ಲವು ಚಿತ್ರವಿಂದ್ರಜಾಲದ ಕೃತ್ಯ |ಸಾಕೆನದೆ ಬೇಕೆನದೆ ನೋಡು ನೀನದನು ||ತಾಕಿಸದಿರಂತರಾತ್ಮಂಗಾವಿಚಿತ್ರವನು |ಹಾಕು ವೇಷವ ನೀನು - ಮಂಕುತಿಮ್ಮ ||
ಲೋಕವೆಲ್ಲವು ದೈವಲೀಲೆಯೆಂಬರೆ; ಪೇಳಿ |ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? ||ಮೂಕಂಗೆ ಕಳ್ ಕುಡಿಸಿ ಚೇಳ್ ಕುಟಕಿಪಾಟವಿದು |ಏಕಪಕ್ಷದ ಲೀಲೆ - ಮಂಕುತಿಮ್ಮ ||
ಲೋಚನದ ಸಂಚಾರ ಮುಖದ ಮುಂದಕಪಾರ |ಗೋಚರಿಪುದೇನದಕೆ ತಲೆಯ ಹಿಂದಣದು? ||ಪ್ರಾಚೀನ ಹೊರತು ಸ್ವತಂತ್ರ ನೀಂ; ಸಾಂತವದು |ಚಾಚು ಮುಂದಕೆ ಮನವ - ಮಂಕುತಿಮ್ಮ ||