ಪ್ರಾರಂಭ ಪದದ ಹುಡುಕು
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ||ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ |ಮುಚ್ಚಿಹವು ಸಾಜತೆಯ - ಮಂಕುತಿಮ್ಮ ||
ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! |ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ||ಬಿಡುವಿರದು ಬಣಗು ಚಿಂತೆಗೆ; ಬುತ್ತಿ ಹಂಗಿರದು |ಕಡಿದಲ್ಲವರ್ಗೆ ಬಾಳ್ - ಮಂಕುತಿಮ್ಮ ||
ಬದುಕಿಗಾರ್ ನಾಯಕರು; ಏಕನೊ ಅನೇಕರೋ? |ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ||ಕುದುರುವುದದೆಂತು ಈಯವ್ಯವಸ್ಥೆಯ ಪಾಡು? |ಅದಿಗುದಿಯೆ ಗತಿಯೇನೊ? - ಮಂಕುತಿಮ್ಮ ||
ಬದುಕು ಕದನದ ತೆರನೆ; ನೋಡೆ ಲೀಲೆಯ ಕದನ |ಮೊದಲುಮುಗಿವುಗಳಿರದ ಚಿತ್ರಲೀಲೆಯದು ||ಇದರೊಳೆಂದಿಗುಮಿರದು ಸೋಲ್ಗೆಲವು ಕಡೆಯೆಣಿಕೆ |ಸದರದಾಟವೆ ಮುಖ್ಯ - ಮಂಕುತಿಮ್ಮ ||
ಬದುಕು ಜಟಕಾಬಂಡಿ; ವಿಧಿಯದರ ಸಾಹೇಬ |ಕುದುರೆ ನೀನ್; ಅವನು ಪೇಳ್ದಂತೆ ಪಯಣಿಗರು ||ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ ||
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು |ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ||ಎದೆಯನುಕ್ಕಾಗಿಸುತ; ಮತಿಗದೆಯ ಪಿಡಿದು ನೀ- |ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ ||
ಬಂಧನಗಳೆಲ್ಲವನು ದಾಟಿ; ಹೊಳೆ ನೆರೆ ನೀರು |ಸಂಧಿಪುದು ಕಡಲ ನೀರ್ಗಳನ್; ಅಂತು ಜೀವನ್ ||ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ |ಸಂದರುಶಿಪನು ಪರನ - ಮಂಕುತಿಮ್ಮ ||
ಬಂಧನವದೇನಲ್ಲ ಜೀವಜೀವಪ್ರೇಮ |ಒಂದೆ ನಿಲೆ ಜೀವವರೆ; ಬೆರೆತರಳೆ ಪೂರ್ಣ ||ದಂದುಗವನ್ ಅರೆಗೆಯ್ದು; ಸಂತಸವನಿಮ್ಮಡಿಪ |ಬಾಂಧವ್ಯ ದೈವಕೃಪೆ - ಮಂಕುತಿಮ್ಮ ||
ಬಂಧುಬಳಗವುಮಂತಕನ ಚಮುವೊ; ಛದ್ಮಚಮು |ದಂದುಗದ ಬಾಗಿನಗಳವರ ನಲುಮೆಗಳು ||ಕುಂದಿಪ್ಪುವಾತ್ಮನನವರ್ಗಳುಪಕಾರಗಳು |ಮಂದಿಗಾಗದಿರು ಬಲಿ - ಮಂಕುತಿಮ್ಮ ||
ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆ |ದಂಡಧರನೋಲಗಕೆ ನಿನ್ನನೆಳೆವವರೋ ||ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ |ಮಂದಹಸಿತದ ಕೊಲೆಯೊ - ಮಂಕುತಿಮ್ಮ ||
ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು |ಚಿನ್ಮಯತೆಯಾತ್ಮಗುಣ - ಮಂಕುತಿಮ್ಮ ||
ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು |ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ||ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು |ಎನ್ನುವಜ್ಜಿಯೊ ಬೊಮ್ಮ - ಮಂಕುತಿಮ್ಮ ||
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು |ಗುರುತಿಸೊಳಿತಿರುವುದನು ಕೇಡುಗಳ ನಡುವೆ ||ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು |ಹರುಷಕದೆ ದಾರಿಯೆಲೊ - ಮಂಕುತಿಮ್ಮ ||
ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು |ಪರಮಾತ್ಮದರ್ಶನವ; ಬೇಕದಕೆ ತಪಸು ||ಪರಿಪೂರ್ಣ ಜೀವನಾನುಭವತಾಪದಿ ಮತಿಯು |ಪರಿಪಕ್ವವಾಗಲದು - ಮಂಕುತಿಮ್ಮ ||
ಬರಿಯ ಪೊಳ್ಳುವಿಚಾರ ಮಾನುಷವ್ಯಾಪಾರ |ಪರಿಕಿಸಲು ಪುಣ್ಯವೆಂಬುದುಮಹಂಕಾರ ||ಅರಳಿ ಮೊಗವನಿತಿನಿತು; ನಕ್ಕು ನಗಿಸಿರೆ ಸಾರ |ಹೊರೆ ಮಿಕ್ಕ ಸಂಸಾರ - ಮಂಕುತಿಮ್ಮ ||