ಪ್ರಾರಂಭ ಪದದ ಹುಡುಕು
ಉಂಡಾತನುಣುತಿರುವರನು ಕಾಣ್ಬ ನಲವಿಂದ |ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ ||ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ |ಕಂಡೆಲ್ಲರೊಳು ತನ್ನ - ಮಂಕುತಿಮ್ಮ ||
ಉಣುವುದುಡುವುದು ಪಡುವುದಾಡುವುದು ಮಾಡುವುದು |ಋಣಗಳೆಲ್ಲವು ಪೂರ್ವಸಂಚಿತಾಂಶಗಳು ||ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ |ಗೊಣಗಾಟವಳಿಸುವುದೆ? - ಮಂಕುತಿಮ್ಮ ||
ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? |ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ||ಮತ್ತು ಮತ್ತನುವರ್ತಿಸುತ; ಭಂಗವಾದಂದು |ಯತ್ನಿಸಿನ್ನುಂ ಮರಳಿ - ಮಂಕುತಿಮ್ಮ ||
ಉದರದೈವಕೆ ಜಗದೊಳೆದುರು ದೈವವದೆಲ್ಲಿ? |ಮೊದಲದರ ಪೂಜೆ; ಮಿಕ್ಕೆಲ್ಲದವರಿಂದ ||ಮದಿಸುವುದದಾದರಿಸೆ; ಕುದಿವುದು ನಿರಾಕರಿಸೆ |ಹದದೊಳಿರಿಸುವುದೆಂತೊ? - ಮಂಕುತಿಮ್ಮ ||
ಉದರಶಿಖಿಯೊಂದುಕಡೆ; ಹೃದಯಶಿಖಿಯೊಂದುಕಡೆ |ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ||ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ |ಪುದಿಯದಾತ್ಮಾರ್ಣವದಿ - ಮಂಕುತಿಮ್ಮ ||
ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು |ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ||
ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು |ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||ನರಜೀವವಂತು ಶುಚಿಯಹುದು ದುಃಖಾಶ್ರುವಿಂ |ತರುವಾಯ ಪುನರುದಯ - ಮಂಕುತಿಮ್ಮ ||
ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? |ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ||ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? |ಕರುಬಿದನ ಹರಿ ಪೊರೆಗೆ - ಮಂಕುತಿಮ್ಮ ||
ಉಸಿರವೊಲನುಕ್ಷಣಂ ಪುರುಷನೊಳವೊಗುತವನ |ಪೊಸಬನಂಗೆಯ್ದು ದೈವಿಕಸತ್ತ್ವಮವನುಂ ||ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ |ಬೆಸಸುತಿಹುದೇಗಳುಂ - ಮಂಕುತಿಮ್ಮ ||