ಪ್ರಾರಂಭ ಪದದ ಹುಡುಕು
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |ಕೊನೆಯೆಲ್ಲಿ? ಚಿಂತಿಸೆಲೊ - ಮಂಕುತಿಮ್ಮ ||
ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ |ಹೊನಲು ನೂರೀ ಬಾಳ ಕಡಲನುಬ್ಬಿಸಲಿ ||ತನುಬಂಧ ಕಳಚಿ; ಜೀವವಖಂಡಚೇತನದ |ಕುಣಿತದಲಿ ಕೂಡಿರಲಿ - ಮಂಕುತಿಮ್ಮ ||
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ |ತನುವಂಗಗಳೊಳೊಂದು; ರೂಪ ಗುಣ ಬೇರೆ ||ಮನದೊಳೊಬ್ಬೊಬ್ಬನೊಂದೊಂದು; ಪ್ರಪಂಚವಿಂ |ತನುವೇಕದೊಳ್ ಬಹುಳ - ಮಂಕುತಿಮ್ಮ ||
ಮನುಜರೂಪದಿನಾದರವನು ಪಡೆಯದ ಹೃದಯ- |ವನುರಾಗವನು ಬಿಡಾಲಕೊ ಶುಕಕೊ ಕಪಿಗೋ ||ಶುನಕಕೋ ಸುರಿದದರ ಮಾರ್ದನಿಯನಾಲಿಪುದು |ತಣಿವು ಜೀವಸ್ವರದೆ - ಮಂಕುತಿಮ್ಮ ||
ಮನುಜಲೋಕವಿಕಾರಗಳನು ನೀನಳಿಸುವೊಡೆ |ಮನಕೊಂದು ದರ್ಪಣವ ನಿರವಿಸೆಂತಾನುಂ ||ಅನುಭವಿಪರವರಂದು ತಮ್ಮಂತರಂಗಗಳ |ಅನುಪಮಾಸಹ್ಯಗಳ - ಮಂಕುತಿಮ್ಮ ||
ಮನುಜಸಾಕಲ್ಯದನುಭವಕೆ ಮಿತಿಗೊತ್ತುಂಟೆ? |ದಿನದಿನವು ಕಡಲಲೆಗಳಂತೆ ಪರಿವುದದು ||ಅನುಮಿತಿಯ ನಿರ್ಧಾರವದರಿಂ ನಿರಾಧಾರ |ದನಿ ನೂರು ನರನೆದೆಗೆ - ಮಂಕುತಿಮ್ಮ ||
ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? |ತನುವನುಗ್ರವ್ರತಗಳಿಂದೆ ದಂಡಿಸಲೇಂ? ||ಬಿನದಗಲನರಸಿ ನೀನೂರೂರೊಳಲೆದೊಡೇಂ? |ಮನವ ತೊರೆದಿರಲಹುದೆ - ಮಂಕುತಿಮ್ಮ ||
ಮನೆಯ ಮಾಳಿಗೆಗಲ್ಲ; ಮುಡಿಯ ಕೊಪ್ಪಿಗೆಗಲ್ಲ |ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ||ಬಣಗು ಕುರಿಚಲು ಗಿಡದ ಬಾಳೇನು? ನೀನಂತು |ಒಣಗಿದೊಡೆ ಸವುದೆ ಸರಿ - ಮಂಕುತಿಮ್ಮ ||
ಮನೆಯ ಸಂಸಾರದಲಿ ವಾಸವಿರುತಾಗಾಗ |ನೆನೆದು ನೀಂ ದೇಗುಲಕೆ ಪೋಗಿಬರುವಂತೆ ||ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ |ಮನೆಗೆ ಬರುವನವೊಲಿರು - ಮಂಕುತಿಮ್ಮ ||
ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು |ಮನವ ಸುಡುವುರಿಯಿಂದ ದೂರ ನೀಂ ನಿಲ್ಲು ||ತನುವಿಗುಪಕೃತಿಗೆಯ್ವ ಭರದಿ ನೀನಾತುಮದ |ಅನುನಯವ ಕೆಡಿಸದಿರು - ಮಂಕುತಿಮ್ಮ ||
ಮನೆಯೆ ಮಠವೆಂದು ತಿಳಿ; ಬಂಧು ಬಳಗವೆ ಗುರುವು |ಅನವರತಪರಿಚರ್ಯೆಯವರೊರೆವ ಪಾಠ ||ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ |ಮನಕೆ ಪುಟಸಂಸ್ಕಾರ - ಮಂಕುತಿಮ್ಮ ||
ಮನೆಯೆಲ್ಲಿ ಸತ್ಯಕ್ಕೆ? ಶ್ರುತಿ ತರ್ಕಮಾತ್ರದೊಳೆ? |ಅನುಭವಮುಮದರೊಂದು ನೆಲೆಯಾಗದಿಹುದೇಂ? ||ಮನು{ಜ}ಹೃದಯಾಂಗಣದೊಳೆನಿತೆನಿತೊ ದನಿಯುದಿಸಿ |ಅಣಕಿಪುವು ತರ್ಕವನು - ಮಂಕುತಿಮ್ಮ ||
ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೊ |ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ ||ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು |ನೆನೆಯದಾತ್ಮದ ಸುಖವ - ಮಂಕುತಿಮ್ಮ ||
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- |ಸ್ತರಿಸುವಂದದಿ; ಸೃಷ್ಟಿ ತನ್ನ ಮೂಲವನು ||ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ |ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ ||
ಮರಣದಿಂ ಮುಂದೇನು? ಪ್ರೇತವೋ? ಭೂತವೋ? |ಪರಲೋಕವೋ? ಪುನರ್ಜನ್ಮವೊ? ಅದೇನೋ! ||ತಿರುಗಿ ಬಂದವರಿಲ್ಲ; ವರದಿ ತಂದವರಿಲ್ಲ |ಧರೆಯ ಬಾಳ್ಗದರಿನೇಂ? - ಮಂಕುತಿಮ್ಮ ||