ಪ್ರಾರಂಭ ಪದದ ಹುಡುಕು
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕಿ ನರನು ||ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೊ! |ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ ||
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು |ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ ||ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? |ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ||
ಎಷ್ಟು ಬಗೆ ಯಂತ್ರಗಳೊಳೆಷ್ಟು ರಸಮಿಶ್ರದಿಂ |ದೆಷ್ಟಾದಿಭೂತಗಳು ಪರಿಪಾಕವೊಂದಿ ||ಒಟ್ಟು ಸೇರಿಹವು ನರನೆಂಬ ಸಿದ್ಧಿಯೊಳವನು |ಸೃಷ್ಟಿಶೈಲದ ಶಿಖರ - ಮಂಕುತಿಮ್ಮ ||
ಎಸಳಿನಡಿ ಗಿಡದ ಬಿಗಿ; ಮೇಲೆ ಗಾಳಿಯ ಸರಸ |ಕುಸುಮದ ಕ್ಷೇಮವಾ ಬಿಗಿತ ಬಿಡುತೆಗಳಿಂ ||ಕುಶಲ ಸೌರಭವ ನಿರ್ಯತ್ನ ಸ್ವತಂತ್ರದಿಂ |ಪಸರಿಪಾ ನಯ ಸುಖವೊ - ಮಂಕುತಿಮ್ಮ ||
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ |ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ||ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು |ಇಳೆಯೊಳಗೊಂದು ಸೊಗ - ಮಂಕುತಿಮ್ಮ ||