ಪ್ರಾರಂಭ ಪದದ ಹುಡುಕು
ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಮ್ |ಇಕ್ಷುದಂಡದವೊಲದು ಕಷ್ಟಭೋಜನವೆ ||ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |ಮಾಕ್ಷಿಕರು ಮಿಕ್ಕೆಲ್ಲ - ಮಂಕುತಿಮ್ಮ ||
ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ್ಯಕ್ಷ- |ನೊಂದರಿಂ ಮಾಯೆಯಾಟವ ಮೀರುವಂತೆ ||ಇಂದ್ರಿಯಾತೀತದರ್ಶನಕೆ ಬೇರೊಂದಕ್ಷಿ |ಸಂಧಾನವನು ಗಳಿಸೊ - ಮಂಕುತಿಮ್ಮ ||
ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ |ಪಾಶವಾಗಲ್ಪಹುದು ನಿನಗೆ ಮೈಮರಸಿ ||ವಾಸನೆಗಳುರುಬಿ ಚಿತ್ತಜ್ವರಂಗಳ ಬಿತ್ತಿ |ಮೋಸದಲಿ ಕೊಲ್ಲುವುವೊ - ಮಂಕುತಿಮ್ಮ ||
ದ್ವೈತವೇನದ್ವೈತವೇನಾತ್ಮದರ್ಶನಿಗೆ? |ಶ್ರೌತಾದಿವಿಧಿಯೇನು? ತಪನಿಯಮವೇನು? ||ನೀತಿ ಸರ್ವಾತ್ಮಮತಿಯದರಿನಮಿತಪ್ರೀತಿ |ಭೀತಿಯಿಲ್ಲದನವನು - ಮಂಕುತಿಮ್ಮ ||