ಪ್ರಾರಂಭ ಪದದ ಹುಡುಕು
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು |ಅಸಮಂಜಸದಿ ಸಮನ್ವಯ ಸೂತ್ರ ನಯವ ||ವೆಸನಮಯ ಸಂಸಾರದಲಿ ವಿನೋದವ ಕಾಣ್ಬ |ರಸಿಕತೆಯೆ ಯೋಗವೆಲೊ - ಮಂಕುತಿಮ್ಮ ||
ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ |ಕಹಿಯೊಗರು ಕಾಯಿ; ಮಿಡಿತನದೊಳದು ಮುಗಿಯೆ ||ಸಿಹಿಯಹುದು ಕಾಯಿ ಹಣ್ಣಾಗೆ; ಜೀವಿತವಂತು |ಮಹಿಮೆಗೊಳುವುದು ಮಾಗೆ - ಮಂಕುತಿಮ್ಮ ||
ಅಳಬೇಕು; ನಗಬೇಕು; ಸಮತೆ ಶಮವಿರಬೇಕು |ಹೊಳೆಯ ನೆರೆವೂಲು ಹೃದಯರಸ ಹರಿಯಬೇಕು ||ಅಲೆಯಿನರಲು ಗದ ಬಂಡೆಯವೊಲಾತ್ಮವಿರಬೇಕು |ತಿಳಿದವರ ಚರಿತವದು - ಮಂಕುತಿಮ್ಮ ||
ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ |ಶಿಲೆಯೆ ನೀಂ ಕರಗದಿರಲ್? ಅರಳದಿರೆ ಮರಳೇಂ? ||ಒಳಜಗವ ಹೊರವಡಿಪ; ಹೊರಜಗವನೊಳಕೊಳುವ |ಸುಳುದಾರಿಯಳುನಗುವು - ಮಂಕುತಿಮ್ಮ ||
ಅಳೆವರಾರ್ ಪೆಣ್ಗಂಡುಗಳನೆಳೆವ ನೂಲುಗಳ? |ಕೆಳೆಪಗೆಗಳೆಲ್ಲವಾಳದಲಿ ಬಲು ತೊಡಕು ||ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ |ತಿಳಿಯಗೊಡನದ ನಮಗೆ - ಮಂಕುತಿಮ್ಮ ||