ಪ್ರಾರಂಭ ಪದದ ಹುಡುಕು
ಸುಟ್ಟಿ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ |ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ||ತೊಟ್ಟಿಹುದು ಲೋಕರೂಪವ; ತಾತ್ತ್ವಿಕನ ವೃತ್ತಿ |ಕಟ್ಟಿದವನಾತ್ಮವನು - ಮಂಕುತಿಮ್ಮ ||
ಸುತೆಯ ಪೋಷಿಸಿ ಬೆಳಸಿ; ಧನಕನಕದೊಡನವಳನ್- |ಇತರಗೃಹಕಿತ್ತು ನೀಂ ಕೇಳ್ವ ಮುಯ್ಯೇನು? ||ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ |ಹಿತ ಮನದ ಪಾಕಕದು - ಮಂಕುತಿಮ್ಮ ||
ಸುತ್ತಮುತ್ತಣ ಗಾಳಿಯಾವಗಂ ನಮ್ಮೊಡಲ |ನೊತ್ತಿದೊಡಮಾ ಹೊರೆಯ ಮನಸು ಕಾಣದವೋಲ್ ||ಬಿತ್ತರದ ಲೋಕಭಾರವನಾತ್ಮನರಿಯದಿರೆ |ಮುಕ್ತಲಕ್ಷಣವದುವೆ - ಮಂಕುತಿಮ್ಮ ||
ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು |ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? |ಕಿತ್ತ ಗಾಳಿಯ ಪಟವೊ - ಮಂಕುತಿಮ್ಮ ||
ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ- |ನಂದದೊಳಮರುಮವೇಂ? ವಿಶ್ವಚೇತನದಾ ||ಸ್ಪಂದನವೆ ಸೌಂದರ್ಯಮದುವೆ ಜೀವನಮೂಲ |ಬಂಧುರತೆ ಬೊಮ್ಮನದು - ಮಂಕುತಿಮ್ಮ ||
ಸುಂದರದ ರಸ ನೂರು; ಸಾರವದರೊಳು ಮೂರು |ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ ||ಒಂದರಿಂದೊಂದು ಬೆಳೆಯಾದಂದು ಜೀವನವು |ಚೆಂದಗೊಂಡುಜ್ಜುಗವೊ - ಮಂಕುತಿಮ್ಮ ||
ಸುಂದರವನೆಸಗು ಜೀವನದ ಸಾಹಸದಿಂದೆ |ಕುಂದಿಲ್ಲವದಕೆ ಸಾಹಸಭಂಗದಿಂದೆ ||ಮುಂದಕದು ಸಾಗುವುದು ಮರಳಿ ಸಾಹಸದಿಂದೆ |ಚೆಂದ ಧೀರೋದ್ಯಮವೆ - ಮಂಕುತಿಮ್ಮ ||
ಸುಮ್ಮನಿರಲೊಲದೆ ತನಗೊಡನಾಡಿಯೊರ್ವಳನು |ನಿರ್ಮಿಸಿ ನಿಜಾಂಶದಿಂ ಮಾಯೆಯೆಂಬವಳಿಂ ||ದುಣ್ಮಿದ ಜಗಜ್ಜಾಲಗಳಲಿ ವಿಹರಿಸುತಿರುವ |ಬೊಮ್ಮನಾಟವ ಮೆರಸೊ - ಮಂಕುತಿಮ್ಮ ||
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |ಹೊಮ್ಮುವೆನು ಕೋಟಿರೂಪದಲಿ ನಾನೆಂದು ||ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |ನಮ್ಮಿರವು ಮಾಯೆಯಲಿ - ಮಂಕುತಿಮ್ಮ ||
ಸುರಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ |ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ||ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ |ಕರುಮಗತಿ ಕೃತ್ರಿಮವೊ - ಮಂಕುತಿಮ್ಮ ||
ಸುಲಭವೇನಲ್ಲ ನರಲೋಕಹಿತನಿರ್ಧಾರ |ಬಲಕೆ ನೋಳ್ವರ್ ಕೆಲರು; ಕೆಲರೆಡಕೆ ನೋಳ್ವರ್ ||ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ |ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ||
ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು |ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ? ||ಜಳ್ಳು ಸುಖದುಃಖವಿರಬಹುದಾದೊಡದರ ಮೊನೆ |ಮುಳ್ಳಹುದು ಜೀವಕ್ಕೆ - ಮಂಕುತಿಮ್ಮ ||
ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ |ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ||ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |ಸತ್ಯ ಜಗದಲಿ ಕಾಣೊ - ಮಂಕುತಿಮ್ಮ ||
ಸೃಷ್ಟಿಚೋದನೆಗಳಿಂ ನರನೊಳಿಷ್ಟಗಳುದಯ- |ವಿಷ್ಟಸಿದ್ಧಿಗೆ ಯಂತ್ರತಂತ್ರಗಳ ಯುಕ್ತಿ ||ತ್ವಷ್ಟೃಕುಶಲದೆ ಸೃಷ್ಟಿವಿಕೃತಿ; ಇಂತನ್ಯೋನ್ಯ- |ಸ್ಪೃಷ್ಟರ್ ಪ್ರಕೃತಿ ನರರು - ಮಂಕುತಿಮ್ಮ ||
ಸೃಷ್ಟಿಯ ವಿಧಾನದಲಿ ಸೊಟ್ಟುಗಳು ನೂರಿಹುವು |ನೆಟ್ಟಗಿಪೆನ್ ಅವನ್ ಎಂದು ನರರ ಚಿರದೀಕ್ಷೆ ||ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು? |ನಿಷ್ಠುರಪ್ರಿಯರವರು - ಮಂಕುತಿಮ್ಮ ||