ಪ್ರಾರಂಭ ಪದದ ಹುಡುಕು
ಮೂರಿರಲಿ ವಾದ; ಮುನ್ನೂರಿರಲಿ; ಸಕಲರುಂ |ಸಾರವಸ್ತುವನೊಂದನೊಪ್ಪಿಕೊಳುವವರೇ ||ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |ಭಾರವಾಗದು ಜಗಕೆ - ಮಂಕುತಿಮ್ಮ ||
ಮೂಲವಸ್ತುವದೊಂದು ಲೀಲೆಗೋಸುಗ ನೂರು |ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ |ಆಳುತಿರು ಜೀವನವ - ಮಂಕುತಿಮ್ಮ ||
ಮೃಗಶೇಷವಿರುವನಕ ಜಗಳ ತಪ್ಪದು ಜಗದಿ |ಹಗೆಗೆ ಕೊಲದವರು ಹಸಿವಿನಿಂದ ಕೊಂದಾರು ||ಟಗರುಜೂಜೋ ಸಭೆಯ ರಗಳೆಯೋ ಕುಸ್ತಿಯೋ |ಸೊಗ ಜನಕೆ ರಣರಂಗ - ಮಂಕುತಿಮ್ಮ ||
ಮೃತನ ಸಂಸಾರಕಥೆ ಶವವಾಹಕರಿಗೇಕೆ? |ಸತಿಯು ಗೋಳಿಡಲಿ; ಸಾಲಿಗನು ಬೊಬ್ಬಿಡಲಿ ||ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |ಧೃತಿಯ ತಳೆ ನೀನಂತು - ಮಂಕುತಿಮ್ಮ ||
ಮೃತ್ಯು ತಾಂ ಬಂದು ಮೋಹಿನಿಯ ರೂಪದಿ ನಿನ್ನ |ಚಿತ್ತವನು ಸೆರೆವಿಡಿದು ನೆತ್ತರನು ಬಸಿದು ||ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ |ಹತ್ಯೆಯಲಿ ಹರುಷಿಪಳೊ - ಮಂಕುತಿಮ್ಮ ||
ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ||
ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ |ಅನುವಪ್ಪುದೊಂದೊಂದು ರೋಗಕೊಂದೊಂದು ||ನಿನಗಮಂತೆಯೆ ನೂರು ನೀತಿಸೂತ್ರಗಳಿರಲು |ಅನುವನರಿವುದೆ ಜಾಣು - ಮಂಕುತಿಮ್ಮ ||
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ |ಧರಣಿಯವು; ಗಗನದವು; ಮನುಜಯತ್ನದವು ||ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ |ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ||
ಮೇರುಪರ್ವತಕಿಹುವು ನೂರೆಂಟು ಶಿಖರಗಳು |ದಾರಿ ನೂರಿರಬಹುದು; ನಿಲುವ ಕಡೆ ನೂರು ||ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |ಮೇರುಸಂಸ್ಕೃತಿಯೆ ಬಲ - ಮಂಕುತಿಮ್ಮ ||
ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ |ಭೂಲೋಕದರಚು ಕೆಳಗಿಂ ಮೂಳೆಯಳುವು ||ಕೇಳಬರುತೀ ಮೂರುಕೂಗೆನ್ನ ಹೃದಯಲಿ |ಮೇಳಯಿಸುತಿದೆ ಸಂತೆ - ಮಂಕುತಿಮ್ಮ ||
ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ |ಮೂಲೆಮುಲೆಯಲಿ ವಿದ್ಯುಲ್ಲಹರಿಯೊಂದು ||ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |ಚಾಲಿಪುದು ಬಿಡು ಕೊಡದೆ - ಮಂಕುತಿಮ್ಮ ||
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ |ಜಗಕೆ ಕಾಣಿಪುದೊಂದು; ಮನೆಯ ಜನಕೊಂದು ||ಸೊಗಸಿನೆಳಸಿಕೆಗೊಂದು; ತನ್ನಾತ್ಮಕಿನ್ನೊಂದು |ಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ ||
ಮೊಳೆವ ಸಸಿಯೊಳು ನಾನು; ತೊಳಗುವಿನನೊಳು ನಾನು |ಬೆಳೆವ ಶಿಶುವೊಳು ನಾನು; ಕೆಳೆನೋಟ ನಾನು ||ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ |ಒಳಗೂಡು ವಿಶ್ವದಲಿ - ಮಂಕುತಿಮ್ಮ ||
ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ |ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ||ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ |ಮೋಕ್ಷ ಸ್ವತಸ್ಸಿದ್ಧ - ಮಂಕುತಿಮ್ಮ ||
ಮೋಹನಾನಂದಭೈರವಿ ಶಂಕರಾಭರಣ |ಶಾಹನ ಕುರಂಜಿ ಕೇದಾರ ಕಾಪಿಗಳ ||ಮೋಹ ಸರ್ವಸ್ವಗಳ ರಾಗಾಬ್ಧಿಯೋ ಬ್ರಹ್ಮ |ಗಾಹಿಸದರೊಳಗೆ ನೀಂ - ಮಂಕುತಿಮ್ಮ ||